ಕಂಬಳಕ್ಕೆ ಒಂದಲ್ಲ ಹತ್ತು ಮುಖಗಳು, ಹತ್ತಲ್ಲ ಮತ್ತಷ್ಟು ಮುಖಗಳು

ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮದ ಅನಾವರಣ

ಸಾಮಾನ್ಯವಾಗಿ ಕಂಬಳ ಅಂದ್ರೆ ಕೋಣಗಳ ಓಟದ ಸ್ಪರ್ಧೆ ಎಂಬ ಭಾವನೆ  ಇದೆ. ಖಂಡಿತಾ ಶುದ್ಧ ಸುಳ್ಳಿದು.ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಓಟದ ಸ್ಪರ್ಧೆಯಾಗಿರುತ್ತಿದ್ರೆ ಕಂಬಳ ಇಷ್ಟು ಸದ್ದು ಮಾಡುತ್ತಿರಲಿಲ್ಲ. ಸಮೂಹ ಸನ್ನಿಗೆ ಒಳಗಾದವರಂತೆ ಹೋರಾಟಕ್ಕೆ ಜನವೂ ಬರುತ್ತಿರಲಿಲ್ಲ.ಕಂಬಳ ಒಂದು ವಿಶಿಷ್ಟ ಜನಪದ ಕಲೆ, ಜನಪದ ಆಚರಣೆ. ಹಾಗಂತ ಅದನ್ನು ಮನೋರಂಜನೆಯ ನೋಟದಲ್ಲಿ ನೋಡುವ ಹಾಗೂ ಇಲ್ಲ. ಕಂಬಳಕ್ಕೆ ಒಂದಲ್ಲ ಹತ್ತು ಮುಖಗಳು, ಹತ್ತಲ್ಲ ಮತ್ತಷ್ಟು ಮುಖಗಳು. ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮಗಳು ಈ ಕಂಬಳದ ಕೆಸರಿನಲ್ಲಿದೆ.

ಈ ಹಿಂದಿನ ಲೇಖನದಲ್ಲಿ ಕಂಬಳಕ್ಕಾಗಿ ಪುರಾಣದಲ್ಲಿ ಅಥವಾ ಹಿಂದಿನ ಕಾಲದಲ್ಲಿ ಏನಾಗಿತ್ತು ಅನ್ನುವುದನ್ನು ವಿವರಿಸಿದ್ದೇವೆ. ಇಂಟರ್ ನೆಟ್ ನಲ್ಲಿ ಹುಡುಕಾಡಿದಾಗ ಮತ್ತಷ್ಟು ಮಾಹಿತಿ ದೊರೆಯಿತು. ಲೇಖಕರ ಮಾಹಿತಿ ಸಿಗಲಿಲ್ಲ. ಹಾಗಾಗಿ ಯಥವತ್ ಆಗಿ ಪ್ರಕಟಿಸುತ್ತಿದ್ದೇವೆ.( ಲೇಖಕರು ಯಾರು ಅನ್ನುವುದು ಗೊತ್ತಾದ್ರೆ ದಯವಿಟ್ಟು ತಿಳಿಸಿ)

“ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಹಳಮೆಯು ‘ಅಗೋಳಿ ಮಂಜಣ್ಣ’ ಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಹಳಮೆಯಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಹಳ್ಳಿಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರುಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ‘ರೆಂಜೆಗುಂಡಿ’ ಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ.

ಕಂಬಳ ಸಂಬಂಧಿ ಈ ಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದ ಕತೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರು ದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳ ಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳ ಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ದತಿ ಬಂತು ಎಂಬ ಹಳಮೆಯಿದೆ. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬಯ್ಲು ಕಂಬಳ ಗದ್ದೆಯಲ್ಲಿ ಜೊಳ್ಳು ಬತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಹಳಮೆಯಿದೆ. ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಪಯ್ಪೋಟಿಗೆ ಸಂಬಂಧಿಸಿದ ಅಂಶ. ಎರಡನೆಯದು ಪಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದಯ್ವಗಳ ಆರಾದನೆಗೆ ಸಂಬಂಧಿಸಿದೆ. ಹೀಗೆ ತನ್ನದೇ ಆದ ಹಿನ್ನಲೆ, ಹಿರಿಮೆ, ಹಾಗೂ ಮೇಲ್ತನವನ್ನು ಹೊಂದಿರುವ ಈ ಸಾಂಸ್ಕೃತಿಕ ಆಟ ಕಂಬಳವು ವಿಶ್ವದೆಲ್ಲೆಡೆ ಹರಡಿ ಕರುನಾಡಿನ ಸಂಸ್ಕ್ರತಿ ಇನ್ನೂ ಹೆಚ್ಚಾಗಿ ಹಬ್ಬಿ ಕರುನಾಡ ಕಂಪು ಎಲ್ಲೆಡೆ ಸೂಸಲಿ ಎಂದು ಬಯಸುತ್ತೇನೆ.”

ಮತ್ತೆ ಕಂಬಳ ಆಚರಣೆಯ ವಿಷಯಕ್ಕೆ ಬರುವುದಾದ್ರೆ ಕಂಬಳದ ಸಿದ್ದತೆ ಸಾಕಷ್ಟು ಮುಂಚಿತವಾಗಿ ಪ್ರಾರಂಭಗೊಳ್ಳುತ್ತದೆ.ದೈವದ ನಂಬಿಕೆ ಮತ್ತು ಪೂಜೆ ಇಲ್ಲಿ ಪ್ರಮುಖ ಪಾತ್ರ.ಅಪಾಯ ಎದುರಾಗದಿರಲಿ ಅನ್ನುವ ಕಾರಣಕ್ಕೆ ಭಾರೀ ಮುನ್ನಚ್ಚರಿಕೆ ವಹಿಸಲಾಗುತ್ತದೆ. ಮುನ್ನೆಚ್ಚರಿಕೆ  ವಹಿಸುವ ಹೊಣೆ ದೇವರದ್ದು, ದೈವದ್ದು.

ಕಂಬಳದಲ್ಲಿ ಇರುವ ವಿಧಗಳನ್ನು ಹಿಂದಿನ ಲೇಖನದಲ್ಲಿ ಹೇಳಿದ್ದೇವೆ. ಕಂಬಳದ ಅದ್ಭುತ ಮತ್ತು ಕಣ್ಣಿಗೆ ಹಬ್ಬ ನೀಡುವ ವಿಧ ಅಂದ್ರೆ ಕಣಿ ಹಲಗೆ ಓಟ. ಕರೆಯಲ್ಲಿ ಓಡಿದ ಕೋಣಗಳು ಕೆಸರು ಮಿಶ್ರಣವನ್ನು ನಿಶಾನೆಗೆ ಹಾರಿಸಬೇಕು. ಕರೆಯ ಎರಡು ಬದಿಗಳಿಗೆ ಕಟ್ಟಿದ ಬಿಳಿ ಬಟ್ಟೆಯನ್ನು ನಿಶಾನೆ ಎಂದು ಕರೆಯುತ್ತಾರೆ. ಸಾಮಾನ್ಯ ಎತ್ತರದಲ್ಲಿ ಇದನ್ನು ಕಟ್ಟಲಾಗಿರುತ್ತದೆ.

ಕೆಸರು ಗದ್ದೆಯಲ್ಲಿ ಗೆದ್ರೆ ಚಿನ್ನ ಬಹುಮಾನ

ಕಂಬಳ ಸ್ಪರ್ಧೆಯಲ್ಲಿ ಗೆದ್ದ ಕೋಣದ ಮಾಲೀಕರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾನವಾಗಿ ಬರುತ್ತದೆ. ಓಡಿದ ಕೋಣಗಳಿಗೆ ಗೋಣಿ ಗೋಣಿ, ಮೂಟೆ ಮೂಟೆ ಆಹಾರ ಸಿಗುತ್ತದೆ. ಕೋಣ ಓಡಿಸಿದ ಜಾಕಿಯನ್ನು ಮರೆಯುತ್ತಾರ ಅವರಿಗೂ ಬಹುಮಾನವುಂಟು.

ಹಾಗಾದ್ರೆ ಕಂಬಳ ಉಳಿಯಬೇಕಾ?

ಕಂಬಳವನ್ನೇ ನಂಬಿಕೊಂಡಿರುವ ಸಾವಿರಾರು ಜನರ ಹಿತದೃಷ್ಟಿಯಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಕಂಬಳ ನಿಷೇಧ ಸರಿಯಲ್ಲ. ಕಂಬಳವನ್ನು ನಂಬಿಕೆ ಆಚರಣೆಯಾಗಿ ಮುನ್ನಡೆಸುವುದರ ಜೊತೆಗೆ ಒಂದು ಕ್ರೀಡೆಯಾಗಿ ಅಭಿವೃದ್ದಿಪಡಿಸಬೇಕು. ಖಂಡಿತ ಕಂಬಳದಲ್ಲಿ ಹಿಂಸೆಗಳಾಗುತ್ತಿತ್ತು. ಕೋಣಗಳು ಉರಿಯುವಂತೆ ಖಾರ ಅರೆಯಲಾಗುತ್ತಿತ್ತು. ಈಗ ಅದಕ್ಕೆ ತಡೆ ಬಿದ್ದಿದೆ. ಹೊಡೆಯುವುದೊಂದು ಹಿಂಸೆ ಅಂದ್ರೆ ಆಹಾರ ಪದ್ದತಿಗೂ ಬ್ರೇಕ್ ಹಾಕಬೇಕಾಗುತ್ತದೆ. ಹಾಗಂತ ಕಂಬಳದಲ್ಲಿ ಹಿಂಸೆ ಇರಬೇಕು ಅಂದಲ್ಲ, ಅಹಿಂಸಾತ್ಮಕವಾಗಿ ಸಂಘಟಿಸಲ್ಪಡಬೇಕು ಅನ್ನುವುದು ಎಲ್ಲರ ಒತ್ತಾಯ.

ಆದ್ರೆ ಈಗ ಕಂಬಳ ಉಳ್ಳವರ ಸೊತ್ತಾಗಿದೆ. ದುಡಿವ ಕೈಗಳು ಜೀತದ ಆಳುಗಳಾಗಿದ್ದಾರೆ. ಸಂಪ್ರದಾಯ,ಆಚರಣೆ, ವೈಭವದ ಹೆಸರಿನಲ್ಲಿ ಶೋಷಣೆಯ ಉಸಿರು ಇಲ್ಲದಂತಾಗಿದೆ.ಆಧುನಿಕ ಕಂಬಳದ ಭರಾಟೆಯಲ್ಲಿ ಆರ್ಥಿಕ ಸಾಮರ್ಥ್ಯವೇ ಮಿಂಚುತ್ತಿದೆ. ಕಂಬಳ ಸಂಪ್ರದಾಯ ಆಚರಣೆ ಅನ್ನುವಂತೆ ಎಲ್ಲಿ ಉಳಿದಿದೆ. ಕದ್ರಿ ಕಂಬಳದ ಕಥೆ ಏನಾಗಿದೆ.ಉಳ್ಳವರ ಕೈಯಲ್ಲಿ ಕಂಬಳವಿದೆ. ಕಂಬಳ ಉಳಿಸಬೇಕು ಅನ್ನುವ ಹೋರಾಟದಲ್ಲಿ ನಾವಿದ್ದೇವೆ.

ಕಂಬಳಕ್ಕೆ ಒಂದಲ್ಲ ಹತ್ತು ಮುಖಗಳು, ಹತ್ತಲ್ಲ ಮತ್ತಷ್ಟು ಮುಖಗಳು
  1. Section 1